ಯಂಗ್, ಎಡ್ವರ್ಡ್
1683 - 1765. ಇಂಗ್ಲಿಷ್ ಕವಿ. ನಾಟಕಕಾರ. ವಿಮರ್ಶಕ ಹ್ಯಾಮ್‍ಷೈರ್‍ನ ವಿಂಚೆಸ್ಟರ್ ಬಳಿಯ ಅಪ್‍ಹ್ಯಾಮ್‍ನಲ್ಲಿ 1683ರಲ್ಲಿ ಹುಟ್ಟಿದ. ತಂದೆ ಸ್ಯಾಲಿಸ್‍ಬರಿಯ ಡೀನ್ ಆಗಿದ್ದ ಹಿರಿಯ ಎಡ್ವರ್ಡ್. ಆತ ಡೀನ್ ಆಗುವ ಮುನ್ನ ಅಪ್‍ಹ್ಯಾಮ್‍ನ ಪಾದ್ರಿಯಾಗಿ (ರೆಕ್ಟರ್), ಅನಂತರ ರಾಜರಾಣಿಯರ (ವಿಲಿಯಮ್ ಮತ್ತು ಮೇರಿ) ಖಾಸಗಿ ಪಾದ್ರಿಯೂ ಆಗಿದ್ದ. ಯಂಗ್‍ನ ವಿದ್ಯಾಭ್ಯಾಸ ಮೊದಲು ವಿಂಚೆಸ್ಟರ್‍ನಲ್ಲಿ, ಅನಂತರ ಆಕ್ಸ್‍ಫರ್ಡಿನ ನ್ಯೂ ಕಾಲೇಜು, ಕಾರ್ಪನ್ ಕ್ರಿಸ್ಟಿ ಕಾಲೇಜುಗಳಲ್ಲಿ ಆಯಿತು. 1708ರಲ್ಲಿ ಕಾನೂನು ಅಧ್ಯಯನ ಶಿಷ್ಯವೇತನ ದೊರಕಿತು. ಆಕ್ಸ್‍ಫರ್ಡ್ ವಿಶ್ವವಿದ್ಯಾಲಯದ ಆಲ್‍ಸೌಲ್ಸ್ ಕಾನೂನು ಕಾಲೇಜಿನಲ್ಲಿ ಓದು 1714ರಲ್ಲಿ ಬಿ. ಸಿ. ಎಲ್. ಪದವಿಯನ್ನೂ 1719ರಲ್ಲಿ ಡಿ. ಸಿ. ಎಲ್. ಪದವಿಯನ್ನೂ ಪಡೆದ.
ಈತ ಸ್ವಭಾವತಃ ಮಹತ್ವಾಕಾಂಕ್ಷಿಯಾಗಿದ್ದು ಕೀರ್ತಿ ಸಂಪತ್ತುಗಳೇ ಜೀವನದ ಪರಮ ಗುರಿ ಎಂಬಂತೆ ನಡೆದುಕೊಂಡ. ಅವುಗಳನ್ನು ಪಡಯಲು ಕೇವಲ ಋಜುಮಾರ್ಗವನ್ನು ಅವಲಂಬಿಸಲಿಲ್ಲ. ಎಂತೆಂಥವರನ್ನೊ ಕಾಡಿ ಬೇಡಿದ. ವಿಷಯಲೋಲುಪರೂ ಚರಿತ್ರಹೀನರೂ ಆಗಿದ್ದ ಶ್ರೀಮಂತರ ಕಾಲನ್ನೂ ಕಟ್ಟಿ ಯಾಚಿಸಿದ. ವ್ಯವಹಾರe್ಞÁನವಿಲ್ಲದ ನಡೆವಳಿಕೆಯಿಂದ ಮೂರ್ಖನೆನಿಸಿಕೊಂಡು ಅಪಹಾಸ್ಯಕ್ಕೆ ಪಕ್ಕಾದುದೂ ಉಂಟು. ಆಗ ಪಟ್ಟ ದೈನ್ಯ, ಬವಣೆ, ನಿರಾಸೆಗಳಿಂದ ಸೃಷ್ಟಿಯಾದ ಈತನ ಸಾಹಿತ್ಯದಲ್ಲಿ ಅಶಾಂತ, ಅತೃಪ್ತ ಬದುಕಿನ ಗೋಳು ಪ್ರತಿಬಿಂಬಿತವಾಗಿದೆ. ಆ ಕಾಲದ ಪ್ರಸಿದ್ಧ ಕಾದಂಬರಿಕಾರರಾದ ರಿಚರ್ಡ್‍ಸನ್, ಕಾಲಿ ಸಿಬ್ಬರ್, ಈತನ ಪ್ರತಿಭೆಯನ್ನು ಗುರುತಿಸಿ, ಮೆಚ್ಚಿಕೊಂಡು ಪ್ರಿಯಮಿತ್ರರಾಗಿದ್ದರು. ದೋಷ ದೌರ್ಬಲ್ಯಗಳಿದ್ದರೂ ಆತನೊಬ್ಬ ಪ್ರತಿಭಾವಂತ ಕವಿ ಎಂದು ಡಾಕ್ಟರ್ ಜಾನ್‍ಸನ್ ಈತನ ಬಗ್ಗೆ ಅಭಿಪ್ರಾಯಪಟ್ಟಿದ್ದಾನೆ.

ಯಂಗ್ 1724ರಲ್ಲಿ ತೀವ್ರ ಹತಾಶಭಾವದಲ್ಲಿ, ಧಾರ್ಮಿಕ ಮಠವನ್ನು ಸೇರಿ 1728ರಲ್ಲಿ ಎರಡನೆಯ ಜಾರ್ಜ್ ದೊರೆಯ ಖಾಸಗಿ ಪಾದ್ರಿಯಾದ. ರಾಜನನ್ನು ಹೊಗಳಿ, ರಾಜಭಕ್ತಿಯನ್ನು ಪ್ರದರ್ಶಿಸಿ ಅನುಗ್ರಹ ಸಂಪಾದಿಸಿದ. 1731ರಲ್ಲಿ ಲೇಡಿ ಎಲಿಜûಬೆತ್ ಲೀ ಎಂಬಾಕೆಯನ್ನು ಮದುವೆಯಾದ. ಆಕೆ ವಿಧವೆ, ಅರ್ಲ್ ಆಫ್ ಲಚ್‍ಫೀಲ್ಡ್‍ನ ಮಗಳು. ಆಕೆ 1741ರಲ್ಲಿ ತೀರಿಹೋದಳು. ಆಕೆಯನ್ನು ತೀವ್ರವಾಗಿ ಪ್ರೀತಿಸುತ್ತಿದ್ದ ಕವಿಗೆ ಇದರಿಂದ ದೊಡ್ಡ ಅಘಾತವುಂಟಾಯಿತು. ಸ್ವಾಭಾವಿಕವಾಗಿಯೇ ಆಗಾಗ ಕಾಣಿಸಿಕೊಳ್ಳುತ್ತಿದ್ದ ಮ್ಲಾನತೆ ಇವನ ವ್ಯಕ್ತಿತ್ವವನ್ನು ಸಂಪೂರ್ಣವಾಗಿ ಆವರಿಸಿಬಿಟ್ಟಿತು. ಈ ವಿಷಣ್ಣಭಾವದಲ್ಲಿರುವಾಗಲೇ ಈತನ ಸುಪ್ರಸಿದ್ಧ ಕೃತಿ ದಿ ಕಂಪ್ಲೈಂಟ್: ಆರ್ ನೈಟ್ ಥಾಟ್ಸ್ ಆನ್ ಲೈಫ್ ಡೆತ್ ಅಂಡ್ ಇಮ್ಮಾರ್ಡಾಲಿಟಿ (1742 - 45) ರಚಿತವಾಯಿತು. ನೀರಸವೂ ಬೋಧಪ್ರದವೂ ಆದ ಈ ಕೃತಿ ಕ್ರಿಶ್ಚಿಯನ್ ಧಾರ್ಮಿಕ ಭಾವನೆಗಳನ್ನು ಎತ್ತಿಹಿಡಿಯುತ್ತದೆ. ಸಾಹಿತ್ಯಮೌಲ್ಯದ ದೃಷ್ಟಿಯಿಂದ ಇದೊಂದು ಸಾಧಾರಣ ಕೃತಿಯಾದರೂ ಇದು ಕವಿಗೆ ಹಣವನ್ನೂ ಖ್ಯಾತಿಯನ್ನೂ ತಂದುಕೊಟ್ಟಿತು. ರೋಬ್ಸ್‍ಪಿಯರ್ ಎಂಬ ಮಹಾಶಯ ನಿತ್ಯಪಾರಾಯಣ ಮಾಡುವುದಕ್ಕೆ ಅನುಕೂಲವಾಗಲೆಂದು ಈ ಪುಸ್ತಕವನ್ನು ಸದಾ ತನ್ನ ತಲೆದಿಂಬಿನ ಅಡಿ ಇಟ್ಟುಕೊಳ್ಳುತ್ತಿದ್ದನಂತೆ. ಮಿಲ್ಟನ್‍ನ ಕಾವ್ಯಕ್ಕಿಂತಲೂ ಶ್ರೇಷ್ಠವಾದ ಕೃತಿ ಎಂಬ ಅತಿರೇಕದ ಹೊಗಳಿಕೆಗೂ (ಹೀಗೆ ಹೊಗಳಿದವನು ಕ್ಲಾಪ್‍ಸ್ಟಾಕ್ ಎಂಬ ವಿಮರ್ಶಕ) ಈ ಕೃತಿ ಪಾತ್ರವಾಯಿತು. ಮ್ಯಾಡಂ ಡಿ ಸ್ಟೇಲ್ ಎಂಬ ಮಹಿಳೆ ಈ ಕೃತಿಯನ್ನು ಆರಾಧಿಸಿದಳು. ಆಧುನಿಕ ಓದುಗರಿಗೆ ಇದೊಂದು ಸಾಧಾರಣ ಕೃತಿ ಅನಿಸಿದರೂ ಆಗಿನ ಕಾಲದಲ್ಲಿ ಇದಕ್ಕೆ ಈ ಕವಿಯ ಜೀವನದಲ್ಲಿ ಪತ್ನಿಯ ಮರಣಾನಂತರ ವಿಷಾದವನ್ನು ಹೆಚ್ಚಿಸುವ ಘಟನೆಗಳೇ ನಡೆದವು. ಮನಸ್ಥಾಪ ಮಾಡಿಕೊಂಡು ಮಗ ದೂರವಾದ. ಮರಣಶಯ್ಯೆಯಲ್ಲಿದ್ದಾಗ ಕವಿ ತನ್ನ ಮಗನ ತಪ್ಪನ್ನು ಕ್ಷಮಿಸಿದ. ಬಾಳಿನ ಕೊನೆಭಾಗವನ್ನು ಗೌರವಾನ್ವಿತವಾಗಿ ಮೆಲ್ವಿನ್ ಮನೆಯಲ್ಲಿ ಕಳೆದ. 1761ರಲ್ಲಿ ಡವೇಜರ್ ಪ್ರಿನ್ಸೆಸ್‍ನ ಖಾಸಗಿ ಪಾದ್ರಿಯಾದ. 1765ರಲ್ಲಿ ತನ್ನ ಎಂಬತ್ತೆರಡನೆಯ ವಯಸ್ಸಿನಲ್ಲಿ ನಿಧನಹೊಂದಿದ.

ಈತ ಗದ್ಯ, ಪದ್ಯ, ವಿಡಂಬನೆ, ನಾಟಕ ಈ ಎಲ್ಲ ಪ್ರಕಾರಗಳೂ ಸೇರಿ ಒಟ್ಟು 24 ಕೃತಿಗಳನ್ನು ರಚಿಸಿದ್ದಾನೆ. ಬುಸಿರಿಸ್ (1719), ದಿ ರಿವೆಂಜ್ (1721), ದಿ ಬ್ರದರ್ಸ್ (1753) - ಇವು ರುದ್ರನಾಟಕಗಳು. ಷೇಕ್ಸ್‍ಸ್ಪಿಯರ್‍ನ ಒಥೆಲೊ ಮಾದರಿಯ `ದಿ ರಿವೆಂಜ್` ರಂಗದ ಮೇಲೆ ಯಶಸ್ವಿಯಾಯಿತು. ಈ ನಾಟಕಗಳ ಉತ್ಪನ್ನವನ್ನೆಲ್ಲ ಕ್ರೈಸ್ತವಾಣಿ ಪ್ರಸಾರಕ ಸಂಘಕ್ಕೆ ದಾನಮಾಡಿದ.

ಈತನ ವಿಡಂಬನಾತ್ಮಕ ಕಾವ್ಯ ಅಲೆಗ್ಸಾಂಡರ್ ಪೋಪ್‍ನ ನೆನಪು ತರುವುದಾದರೂ ಪೋಪ್‍ನ ಕಲಾತ್ಮಕ ರಚನೆಗೆ ಹೋಲುವುದಿಲ್ಲ, ಅಲ್ಲಲ್ಲಿ ಹೊಳೆಯುವ ಚಿಕ್ಕ ಸೂತ್ರರೂಪಿ ನುಡಿಗಳು, ಸಾಲುಗಳ ನೆನಪಿನಲ್ಲಿ ಉಳಿಯುವಂತಹವು. ಪೋಪ್‍ನ ವಿಚಾರಧಾರೆಗಿಂತ ಸಂರ್ಪೂಣವಾದ ಬೇರೆಯ ವಿಚಾರ ಈತನದು. ವಿಡಂಬನೆಯಲ್ಲಿ ಮೊನಚಿದ್ದರೂ ಸಹಜವಾಗಿ ಹೊಮ್ಮಿದಂತಿರದೆ ತಿಣಿಕಿ ಬರೆದಂತಿದೆ. ರೂಪ - ರಚನೆಗಳಲ್ಲಿ ಕವಿ ರಿಕ್ತನೆಂಬುದು ಎದ್ದುಕಾಣುತ್ತದೆ. ಈತನ ಪ್ರಗಾಥಗಳಲ್ಲಿ ಕಾವ್ಯಾಂಶಕ್ಕಿಂತ ಆಸ್ಥಾನದ ಭಟ್ಟಂಗಿತನವೇ ಹೆಚ್ಚು. ಈತ ಮೊದಲಿಗೆ ವೀರದ್ವಿಪದಿಯನ್ನು ಬಳಸಿ ಬರೆದ ವಿಡಂಬನಾತ್ಮಕ ಕಾವ್ಯಗಳಾದ ದಿ ಲವ್ ಆಫ್ ಫೆಮ್, ದಿ ಯೂನಿವರ್ಸಲ್ ಪ್ಯಾಷನ್ (1725 - 28) ಎಂಬ ಕವಿತೆಗಳು ಕೀರ್ತಿ ಹಣವನ್ನು ಯಥೇಚ್ಛವಾಗಿ ಗಳಿಸಿದವು. ಪ್ರಧಾನಿ ರಾಬರ್ಟ್ ವಾಲ್ಪೋಲ್‍ನನ್ನು ಸುಪ್ರೀತನನ್ನಾಗಿ ಮಾಡಲು ಬರೆದ ದಿ ಇನ್‍ಸ್ಟಾಲ್ಮೆಂಟ್ ಎಂಬ ಕವನ ಈತನಿಗೆ 200 ಪೌಂಡ್ ವಿಶ್ರಾಂತಿ ವೇತನವನ್ನು ಗಳಿಸಿಕೊಟ್ಟಿತು. ಅದರ ಪೊಯೆಟ್ ಲಾರಿಯೆಟ್ ಆಗಬೇಕೆಂಬ ಈತನ ಆಸೆ ಮಾತ್ರ ಕಡೆ ತನಕ ಈಡೇರಲಿಲ್ಲ.
						       (ಕೆ.ಬಿ.ಪಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ